It look's like you don't have Adobe Flash Player installed. Get it now.
PRAJAVANI ARTICLE-24th JAN
ಭಾರತದಲ್ಲಿ ಕೊಳಲು ತಯಾರಿಸುವ ಮಂದಿ ಬೆರಳೆಣಿಕೆಯಷ್ಟು. ಅವರಲ್ಲಿ ಮೈಸೂರಿನಲ್ಲಿರುವ ರವಿಶಂಕರ್ ಮಿಶ್ರ ಕೂಡ ಒಬ್ಬರು. ಕೊಳಲನ್ನು ನುಡಿಸಲೂ ಗೊತ್ತಿರುವ ಇವರು ಪನ್ನಾಲಾಲ್ ಘೋಷ್ ಪರಂಪರೆಯ ಕೊಳಲುಗಳನ್ನು ತಯಾರು ಮಾಡುತ್ತಾರೆ. ಯೌವನದಲ್ಲಿ ನುಡಿಸಲು ಒಳ್ಳೆಯ ಕೊಳಲು ಸಿಗದೇಹೋದದ್ದು ಇಂಥ ಸಾಧನೆಗೆ ಕಾರಣವಾಯಿತು.
ಯುವ ಕೊಳಲು ವಾದಕ ರವಿಶಂಕರ್ ಮಿಶ್ರಾ ಮನೆಯ ಕಾರ್ ಶೆಡ್‌ನ ಬಾಗಿಲು ತೆರೆದರು, ಅಲ್ಲಿ ಕಾರು ಇರಲಿಲ್ಲ; ಬದಲಿಗೆ ಬಿದಿರಿನ ನೂರಾರು ತುಂಡುಗಳಿದ್ದವು. ಅವುಗಳನ್ನು ನೋಡಿ ಅಚ್ಚರಿಕೊಂಡಾಗ ‘ಇವುಗಳು ನಿಮಗೆ ಬಿದಿರು ತುಂಡುಗಳಂತೆ ಕಾಣಿಸುತ್ತಿವೆ, ನನಗೆ ಮಧುರ ನಾದವನ್ನು ಸೃಷ್ಟಿಸುವ ಕೊಳಲಾಗಿ ಕಾಣಿಸುತ್ತಿವೆ’ ಎಂದರು ಮಿಶ್ರಾ.|
ರವಿಶಂಕರ್ ಮಿಶ್ರಾ ಬರೀ ಕೊಳಲು ವಾದಕ ಅಷ್ಟೇ ಅಲ್ಲ, ಕೊಳಲು ತಯಾರಕರೂ ಹೌದು. ಮಿಶ್ರಾ ಬಿದಿರು ತುಂಡುಗಳಿಂದ ರೂಪಿಸಿರುವ ನೂರಾರು ಕೊಳಲುಗಳು ಈಗಾಗಲೇ ದೇಶ-ವಿದೇಶಗಳ ಕೊಳಲು ವಾದಕರ ಉಸಿರನ್ನು ಇಂಪಾದ ಸ್ವರವಾಗಿ ಹೊರ ಹೊಮ್ಮಿಸುತ್ತಿವೆ!
ನಲವತ್ತರ ಹರೆಯದ ರವಿಶಂಕರ್ ಮಿಶ್ರಾ ಮೈಸೂರಿನವರು. ಬಾಲ್ಯದಲ್ಲೇ ತಂದೆ ದಿನೇಶ್‌ಚಂದ್ರ ಮಿಶ್ರಾರಿಂದ ಕೊಳಲು ನುಡಿಸುವ ಪಾಠ ಕಲಿತರು. ಯೌವನದಲ್ಲಿ ತಾವು ನುಡಿಸಲು ಖುಷಿಯಾಗುವಂತಹ ಕೊಳಲು ಸಿಗುತ್ತಿಲ್ಲ ಎನ್ನುವ ಅತೃಪ್ತಿ ಕಾಡುತ್ತಲೇ ಇತ್ತು. ಹೀಗಾಗಿ 1995ರಲ್ಲಿ ಮುಂಬೈಗೆ ತೆರಳಿದ ಮಿಶ್ರಾ ಹೆಸರಾಂತ ಹಿಂದೂಸ್ತಾನಿ ಕೊಳಲು ವಾದಕ ನಿತ್ಯಾನಂದ ಹಲ್ದೀಪುರ್ ಅವರನ್ನು ಭೇಟಿ ಮಾಡಿ ತಮ್ಮ ಅತೃಪ್ತಿಯನ್ನು ತೋಡಿಕೊಂಡರು. ಆಗ ನಿತ್ಯಾನಂದರು ‘ನೀನೇ ಏಕೆ ಕೊಳಲು ತಯಾರಿಸಬಾರದು’ ಎಂದು ಸಲಹೆ ನೀಡಿದರು.
ಇದರಿಂದ ಉತ್ತೇಜಿತರಾದ ಮಿಶ್ರಾ, ತಂದೆ ಅಸ್ಸಾಂನಿಂದ ತಂದು ಇರಿಸಿದ್ದ ಬಿದಿರು ತುಂಡುಗಳನ್ನು ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಕೊಳಲು ಮಾಡಲು ದಿನವಿಡೀ ತಲೆಕೆಡಿಸಿಕೊಂಡರು. ಬಳಿಕ ತಾವೇ ತಯಾರಿಸಿದ ಕೊಳಲು ಮಧುರ ನಾದವನ್ನು ಹೊರಡಿಸಿದಾಗ ರೋಮಾಂಚನಗೊಂಡರು. ಇದರಿಂದ ಖುಷಿಯಾದ ಮಿಶ್ರಾ ಇದ್ದಬದ್ದ ಬಿದಿರು ತುಂಡುಗಳನ್ನು ಕೊರೆದು ಕೊಳಲು ಮಾಡಿ ಮತ್ತೆ ಮುಂಬೈಗೆ ಹೊರಟರು. ಅಲ್ಲಿ ನಿತ್ಯಾನಂದ ಹಲ್ದೀಪುರ್ ಅವರ ಗುರು ದೇವೇಂದ್ರ ಮುರುಡೇಶ್ವರ ಅವರ ಬಳಿಗೆ ಹೋದರು. ಅವರ ಮುಂದೆ ಏಳೆಂಟು ಕೊಳಲುಗಳನ್ನು ಇಟ್ಟು ‘ಇವುಗಳನ್ನು ನಾನೇ ಮಾಡಿದ್ದು, ಹೇಗಿವೆ ಹೇಳಿ’ ಎಂದರು. ಅವುಗಳನ್ನು ನುಡಿಸಿದ ದೇವೇಂದ್ರರು ‘ತುಂಬಾ ಚೆನ್ನಾಗಿವೆ’ ಎಂದವರು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.
ಮಿಶ್ರಾ ಮುಂಬೈನಿಂದ ಮೈಸೂರಿಗೆ ಹಿಂದಿರುಗುವ ಹೊತ್ತಿಗೆ ಎದೆ ತುಂಬ ವಿಶ್ವಾಸವಿತ್ತು. ಹೀಗಾಗಿ ತಾವೇ ಅಸ್ಸಾಂ ನಸಿಲ್ಚಾರ್ ಎನ್ನುವ ಊರಿಗೆ ಹೋದರು. ಈ ಊರು ಬಿದಿರಿಗೆ ಖ್ಯಾತವಾದದ್ದು. ಅಲ್ಲಿ ನೂರಾರು ಬಿದಿರು ತುಂಡುಗಳನ್ನು ಖರೀದಿಸಿದರು. ಕುಳಿತಲ್ಲಿ ನಿಂತಲ್ಲಿ ಕೊಳಲು ಮಾಡಲು ಆರಂಭಿಸಿದರು. ಹತ್ತೊ, ಹನ್ನೆರಡೋ ಬಿದಿರನ್ನು ಕೊರೆದರೆ ನಾಲ್ಕೋ, ಐದೋ ಮಾತ್ರ ಕೊಳಲು ಆಗುತ್ತಿದ್ದವು. ಉಳಿದವು ನೀರು ಕಾಯಿಸುವ ಒಲೆ ಸೇರುತ್ತಿದ್ದವು. ‘ಒಂದು ಕೊಳಲು ಮಾಡಲು ವಾರ ಸಮಯ ಬೇಕು. ಆದರೂ ಏನಾದರೂ ದೋಷ ಉಳಿದುಕೊಂಡು ಬಿಟ್ಟಿರುತ್ತದೆ. ಪರಿಪೂರ್ಣ ಕೊಳಲು ಮಾಡಲು ಅಪಾರ ಪರಿಶ್ರಮ, ಕೌಶಲ್ಯಬೇಕು. ಇಲ್ಲದೇ ಹೋದರೆ ಕೊಳಲು ಶುದ್ಧ ಶ್ರುತಿಯನ್ನು ಹೊರಡಿಸುವುದಿಲ್ಲ’ ಎನ್ನುತ್ತಾರೆ ರವಿಶಂಕರ್ ಮಿಶ್ರಾ.
ಕಳೆದ 20 ವರ್ಷಗಳಿಂದ ಮಿಶ್ರಾ ಕೊಳಲು ವಾದನದ ಜೊತೆಗೆ ಕೊಳಲುಗಳನ್ನು ತಯಾರಿಸುತ್ತಿದ್ದಾರೆ. ಇಲ್ಲಿಯವರೆಗೆ ಒಂದು ಸಾವಿರಕ್ಕೂ ಹೆಚ್ಚು ಕೊಳಲುಗಳನ್ನು ತಯಾರಿಸಿದ್ದು, ಇಂಡೋನೇಷಿಯಾ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್, ಅಮೆರಿಕ ದೇಶಗಳ ಕೊಳಲು ವಾದಕರಿಗೆ ಮಾರಾಟ ಮಾಡಿದ್ದಾರೆ. ಇನ್ನಿತರ ದೇಶಗಳಲ್ಲಿ ಮಿಶ್ರಾರ ಶಿಷ್ಯರು ಇವರು ತಯಾರಿಸುವ ಕೊಳಲುಗಳನ್ನೇ ನುಡಿಸುತ್ತಿದ್ದಾರೆ.
ಭಾರತದಲ್ಲಿ ಬೆರಳೆಣಿಕೆಯಷ್ಟು ಮಂದಿ ಕೊಳಲು ವಾದಕರು ಮಾತ್ರ ಕೊಳಲುಗಳನ್ನು ತಯಾರಿಸುತ್ತಿದ್ದಾರೆ. ಅವರಲ್ಲಿ ಮಿಶ್ರಾ ಕೂಡ ಒಬ್ಬರು. ಇವರು ಪನ್ನಾಲಾಲ್ ಘೋಷ್ ಪರಂಪರೆಯಂತೆ ಕೊಳಲುಗಳನ್ನು ತಯಾರಿಸುತ್ತಾರೆ. ಮಿಶ್ರಾ 12 ಇಂಚಿನಿಂದ 42 ಇಂಚು ಉದ್ದದ ಕೊಳಲುಗಳನ್ನೂ ತಯಾರು ಮಾಡುತ್ತಾರೆ.
‘ಅಂಗಡಿಗಳಲ್ಲಿ ಕೊಳಲುಗಳು ಸಿಗುತ್ತವೆ. ಆದರೆ ಅವುಗಳಲ್ಲಿ ಸಾಕಷ್ಟು ದೋಷ ಇರುತ್ತದೆ. ಆದ್ದರಿಂದ ಹೆಸರಾಂತ ಕೊಳಲು ವಾದಕರು ನಮ್ಮಂತಹ ಕೊಳಲು ವಾದಕರು ತಯಾರು ಮಾಡುವ ಕೊಳಲುಗಳನ್ನೇ ಬಳಸುತ್ತಾರೆ. ನಮ್ಮ ಗುರು ನಿತ್ಯಾನಂದ ಹಲ್ದೀಪುರ್ ಈಗಲೂ ನಾನು ತಯಾರಿಸಿದ ಕೊಳಲನ್ನು ನುಡಿಸುತ್ತಾರೆ. ಒಳ್ಳೆಯ ಕೊಳಲು ವಾದಕ ಆಗಿದ್ದರೆ ಮಾತ್ರ ಉತ್ತಮ ಕೊಳಲುಗಳನ್ನು ತಯಾರಿಸಲು ಸಾಧ್ಯ’ ಎನ್ನುವ ಮಿಶ್ರಾ, ಸದಾ ಸಂಶೋಧನೆಯಲ್ಲಿ ತೊಡಗಿರುತ್ತಾರೆ.
ಮಿಶ್ರಾ, ದೇಶ-ವಿದೇಶಗಳಲ್ಲಿ ಕೊಳಲು ನುಡಿಸಿದ್ದಾರೆ. ಈಗಾಗಲೇ ಭಾವಯಾನ, ಆನಂದ್, ಧ್ಯಾನ್, ಸಂಗಮ್‌ಗಳಂತಹ ಸಿ.ಡಿ.ಗಳನ್ನು ಹೊರ ತಂದಿದ್ದಾರೆ. ಮಿಶ್ರಾ ಮೈಸೂರಿನಲ್ಲಿ ತಯಾರಿಸಿದ ಕೊಳಲುಗಳು ವಿದೇಶಗಳಲ್ಲಿಯೂ ನಾದದ ಅಲೆಯನ್ನು ಸೃಷ್ಟಿಸುತ್ತಿವೆ. (ರವಿಶಂಕರ್ ಮಿಶ್ರಾ: 9448150433)
-ಸುದೇಶ ದೊಡ್ಡಪಾಳ್ಯ
ಚಿತ್ರ: ಎಚ್.ಜಿ.ಪ್ರಶಾಂತ್
Bansuri Music CD's
bansuri glossary term
A jugalbandhi is a performance, in Indian classical music, featuring two solo musicians. The word jugalbandhi means, literally, "entwined twins." The duet could be either vocal or instrumental.
